ಮಾಸ್‍ಬೌವರ್ ಪರಿಣಾಮ
ಗ್ಯಾಮ ಕಿರಣಗಳ ಉತ್ಸರ್ಜನೆಯಲ್ಲಿ ಕಂಡು ಬರುವ ವಿಶಿಷ್ಟ ವಿದ್ಯಮಾನ. ರೂಡಾಲ್ಫ್ ಲಡ್ವಿಗ್ ಮಾಸ್‍ಬೌವರ್ ಆವಿಷ್ಕರಿಸಿದ್ದರಿಂದ (1958) ಈ ಹೆಸರು. 191Iಡಿ (ಇರಿಡಿಯಮ್) ಧಾತುವಿನಿಂದ ಉಂಟಾದ 129 ಕಿಲೊಎಲೆಕ್ಟ್ರಾನ್‍ವೋಲ್ಟ್ ಶಕ್ತಿಯ ಗ್ಯಾಮಕಿರಣಗಳ ನ್ಯೂಕ್ಲಿಯರ್ ಅನುವಾದ ಚದರಿಕೆಯನ್ನು (ನ್ಯೂಕ್ಲಿಯರ್ ರೆಸೊನೆನ್ಸ್ ಸ್ಕ್ಯಾಟರಿಂಗ್) ಶೋಧಿಸಿದಾಗ (1957) ಈ ಪರಿಣಾಮದ ಅಸ್ತಿತ್ವ ಪ್ರಕಟವಾಯಿತು.

	ಯಾವುದಾದರೂ ನ್ಯೂಕ್ಲಿಯಸ್ಸಿನಿಂದ ಉತ್ಸರ್ಜಿತವಾದ ಗ್ಯಾಮಕಿರಣಗಳ ಶಕ್ತಿ ಸ್ವಲ್ಪ ಚದರಿಕೊಂಡಿರುತ್ತದೆ. ಇದರ ಕಾರಣಗಳು ಹಲವು. ಮೊದಲನೆಯದಾಗಿ ಹೈಸನ್‍ಬರ್ಗನ ಅನಿಶ್ಚಿತತಾ ತತ್ತ್ವದ ಪ್ರಕಾರ ಸಹಜವಾಗಿಯೇ ಶಕ್ತಿಯ ಮೌಲ್ಯ ನಿಖರವಾಗಿರುವುದಿಲ್ಲ, ಅದು ಸ್ವಲ್ಪ ಹರಡಿರುತ್ತದೆ. ಇದಲ್ಲದೆ ಎಲ್ಲ ಪರಮಾಣುಗಳೂ ಶಾಖದ ಕಾರಣವಾಗಿ ಕಂಪಿಸುತ್ತಿರುತ್ತವೆ. ಗ್ಯಾಮಕಿರಣವನ್ನು ಉತ್ಸರ್ಜಿಸುವ ನ್ಯೂಕ್ಲಿಯಸ್ ಮತ್ತು ಅದನ್ನು ಹೀರಿಕೊಳ್ಳುವ ಸಾಧನೆ ಇವುಗಳ ನಡುವೆ ಅನಿರ್ದಿಷ್ಟ ಮತ್ತು ಸದಾ ಬದಲಾಗುತ್ತಿರುವ ಚಲನೆ ಏರ್ಪಡುತ್ತದೆ. ಇದರಿಂದಾಗಿ ಗ್ಯಾಮಕಿರಣಗಳ ಶಕ್ತಿ ಅಸ್ಪಷ್ಟವಾಗುತ್ತದೆ. ಸಾಧಾರಣ ಪ್ರಯೋಗ ಮಂದಿರ ಉಷ್ಣತೆಗಳಲ್ಲಿ ಈ ಅಸ್ಪಷ್ಟತೆಯ ಮೌಲ್ಯ 0.ಟeಗಿ. ಇದು ಶಕ್ತಿಯ ಚದರಿಕೆಯ ಎರಡನೆಯ ಕಾರಣ. ಇದಕ್ಕೆ ಡಾಪ್ಲರ್ ಚದರಿಕೆ ಎಂದು ಹೆಸರು.

	ಮಾಸ್‍ಬೌವರ್ ತನ್ನ ಪ್ರಯೋಗದಲ್ಲಿ ಈ ಎರಡನೆಯ ಮೂಲದ ಡಾಪ್ಲರ್ ಅಗಲವಾಗುವಿಕೆಯನ್ನು ಕಡಿಮೆ ಮಾಡುವುದಕ್ಕಾಗಿ ಗ್ಯಾಮಕಿರಣಗಳ ಮೂಲವನ್ನೂ ಅವನ್ನು ಹೀರಿಕೊಳ್ಳುವ ಸಾಧನವನ್ನೂ ಶೀತಲೀಕರಿಸಿದ. ನಿಮ್ನ ಉಷ್ಣೆಗಳಲ್ಲಿ ಪರಮಾಣುಗಳ ಕಂಪನ ಕಡಿಮೆ ಆಗುವುದರಿಂದ ಶೀತಲೀಕರಣದಿಂದಾಗಿ ಗ್ಯಾಮಕಿರಣಗಳ ಶಕ್ತಿಯ ಚದರಿಕೆ ಕಡಿಮೆಯಾಗಿ ಗ್ಯಾಮಕಿರಣಗಳನ್ನು ಇನ್ನು ನಿಖರವಾಗಿ ಪರಿಶೀಲಿಸಬಹುದೆಂದು ಈತ ಊಹಿಸಿದ. ಆದರೆ ಫಲಿತಾಂಶ ತದ್ವಿರುದ್ಧವಾಗಿತ್ತು : ಶೀತಲೀಕರಣದಿಂದ ಗ್ಯಾಮಕಿರಣಗಳ ಶಕ್ತಿಯ ಚದರಿಕೆ ಹೆಚ್ಚಾಗಿತ್ತು. ಇದೇ ಮಾಸ್‍ಬೌವರ್ ಪರಿಣಾಮ.

	ಇತರ ರೀತಿಯ ಕಿರಣಗಳಿಗೆ ಅನ್ವಯಿಸುವಂತೆ ಲ್ಯಾಂಬ್ ಅಭಿವರ್ಧಿಸಿದ್ದ ಸಿದ್ಧಾಂತವನ್ನೇ ಉಪಯೋಗಿಸಿಕೊಂಡು ಮಾಸ್‍ಬೌವರ್ ಈ ಪರಿಣಾಮವನ್ನು ವಿವರಿಸಿದ. ಇದರಿಂದ ನ್ಯೂಕ್ಲಿಯಸುಗಳ ಮತ್ತು ಸ್ಫಟಿಕಗಳ ರಚನೆಯ ಬಗೆಗೆ ಹೆಚ್ಚಿನ ಮಾಹಿತಿ ದೊರೆಯುವಂತಾಯಿತು.

	ಇರಿಡಿಯಮ್ಮಿನ ಗ್ಯಾಮಕಿರಣದಲ್ಲಿ ಈ ಪರಿಣಾಮವನ್ನು ಶೋಧಿಸುವುದು ಕಷ್ಟ. ಮುಂದೆ ಇದನ್ನು ಕಬ್ಬಿಣದಲ್ಲಿ (57ಈe). ಶೋಧಿಸಲಾಯಿತು. ಕಬ್ಬಿಣದಲ್ಲಿ ಪರಿಣಾಮ ಪ್ರಬಲವಾಗಿತ್ತು. ಇದನ್ನು 1000oಅ ಯಲ್ಲಿಯೂ ನೋಡಬಹುದಾದ್ದರಿಂದ ಇದರಲ್ಲಿ ಮಾಸ್‍ಬೌವರ್ ಪರಿಣಾಮದ ಪರಿಶೀಲನೆ ಸುಲಭವಾಯಿತು.

	42 ವಿವಿಧ ಧಾತುಗಳ 72 ಐಸೊಟೋಪುಗಳ 88 ಗ್ಯಾಮಕಿರಣ ಪ್ರಸರಣದಲ್ಲಿ ಮಾಸ್‍ಬೌವರ್ ಪರಿಣಾಮ ಕಂಡುಬಂದಿದೆ. ಇದು ಎಲ್ಲ ಗ್ಯಾಮಕಿರಣ ಪ್ರಸರಣದಲ್ಲಿಯೂ ಇರುವುದಾದರೂ ಹಲವುಕಡೆ ಇದರ ಪರಿಣಾಮ ಅತ್ಯಲ್ಪವಾಗಿದ್ದು ಇದನ್ನು ಶೋಧಿಸುವುದು ಕಠಿಣವಾಗುತ್ತದೆ. ಮಾಸ್‍ಬೌವರ್ ಪರಿಣಾಮದ ಉಪಯೋಗವನ್ನು ಹತ್ತು ಹನ್ನೆರಡು ಧಾತುಗಳಲ್ಲಿ ಮಾತ್ರ ಪಡೆಯಲಾಗಿದೆ. ಇವುಗಳಲ್ಲಿ ಕಬ್ಬಿಣ, ತವರ, ಆಂಟಿಮೊನಿ, ಟೆಲ್ಯೂರಿಯಮ್, ಅಯೊಡೀನ್, ಕ್ಸೀನಾನ್, ಯೂರೊಪಿಯಮ್, ಚಿನ್ನ ಮತ್ತು ನೆಪ್ಚೊನಿಯಮ್ ಸೇರಿವೆ.		
		(ಕೆ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ